ಆಯುಧ/ಬ್ರಹ್ಮಾಸ್ತ್ರ/ ಅಪ್ರತಿಭ
ಶಸ್ತ್ರ, ಬ್ರಹ್ಮ ಅಧಿದೇವತೆಯಾಗಿರುವ ಅಸ್ತ್ರ, ಧೈರ್ಯಗುಂದು ಎಂಬರ್ಥಗಳು ಕ್ರಮವಾಗಿ ಈ ಪದಗಳಿಗಿವೆ.
ಯುಧ್ ಧಾತು ಹೊಡೆತ ಎಂಬರ್ಥ ಹೊಂದಿದ್ದು, ಆ ಉಪಸರ್ಗ ಮತ್ತು ಕಃ ಪ್ರತ್ಯಯ ಸೇರಿ, ಆಯುಧ ಪದ ಸಿದ್ಧಿಸಿ, ಶಸ್ತ್ರ, ಅಸ್ತ್ರ, ಬಾಣ ಮುಂತಾದ ಅರ್ಥಗಳು ಸ್ಫುರಿಸುತ್ತವೆ.
ಬೃಹಿ ಧಾತು ವೃದ್ಧ ಎಂಬರ್ಥ ಹೊಂದಿದ್ದು, ಮನಿನ್ ಪ್ರತ್ಯಯ ಸೇರಿ, ಬ್ರಹ್ಮನ್ ಪದ ಸಿದ್ಧಿಸಿ, ಚತುರ್ಮುಖ, ಪರಮಾತ್ಮ, ಜ್ಞಾನ, ಶ್ರುತಿ ಎಂಬರ್ಥಗಳು ಸ್ಫುರಿಸುತ್ತವೆ. ಕನ್ನಡದಲ್ಲಿ ಬ್ರಹ್ಮ ಎಂದಾಗಿದೆ. ಅಸು ಧಾತು ಎಸೆಯುವುದು ಎಂಬರ್ಥ ಹೊಂದಿದ್ದು, ಷ್ಟ್ರನ್ ಪ್ರತ್ಯಯ ಸೇರಿ, ಅಸ್ತ್ರ ಪದ ಸಿದ್ಧಿಸಿ, ಧನುಸ್ಸು, ಆಯುಧ, ಮಂತ್ರಶಕ್ತಿಯಿಂದ ಪ್ರಯೋಗಿಸುವ ಆಯುಧ ಎಂಬರ್ಥಗಳಿವೆ. ಬ್ರಹ್ಮಾಸ್ತ್ರ ಸಮಸ್ತಪದಕ್ಕೆ ಬ್ರಹ್ಮ ಅಧಿದೇವತೆಯಾಗಿರುವ ಅಸ್ತ್ರ ಎಂಬರ್ಥ ಸ್ಫುರಿಸುತ್ತದೆ.
ಭಾ ಧಾತು ಕಾಂತಿ ಎಂಬರ್ಥ ಹೊಂದಿದ್ದು, ಪ್ರತಿ ಉಪಸರ್ಗ ಮತ್ತು ಕಃ ಪ್ರತ್ಯಯ ಸೇರಿ, ಪ್ರತಿಭಾ ಪದ ಸಿದ್ಧಿಸಿ, ಬುದ್ಧಿಶಕ್ತಿ, ಹೊಸ ಅರಿವು ಮೂಡುವುದು, ದೀಪ್ತಿ ಮುಂತಾದ ಅರ್ಥಗಳಿವೆ. ನಿಷೇಧಾರ್ಥದ ನ ಸೇರಿ ನಪ್ರತಿಭಾ> ಅಪ್ರತಿಭಾ ( ನ ಕಾರಕ್ಕೆ ಅ ಆದೇಶ) ಪದ ಸಿದ್ಧಿಸಿ, ಜ್ಞಾನವಿಲ್ಲದಿರುವುದು, ಧೈರ್ಯಗುಂದುವುದು, ಹಿಂಜರಿಯುವುದು ಎಂಬರ್ಥಗಳು ಸ್ಫುರಿಸುತ್ತವೆ.
ಓದಿದ್ದಕ್ಕಾಗಿ ಧನ್ಯವಾದಗಳು.??
ಅ.ನಾ.