ಅಬ್ಧಿಪ/ವರುಣ/ಉರ್ವಿ/ಯಜ್ಞ

ಪದ ಚಿಂತನ

ಪದ ಚಿಂತನ

ಅಬ್ಧಿಪ/ವರುಣ/ಉರ್ವಿ/ಯಜ್ಞ

ವರುಣ, ಜಲಾಧಿದೇವತೆ,ಭೂಮಿ,ಯಾಗ ಎಂಬರ್ಥಗಳು ಕ್ರಮವಾಗಿ ಈ ಪದಗಳಿಗಿವೆ.

ಆಪ್ಲೃ ಧಾತು ವ್ಯಾಪ್ತಿ ಎಂಬರ್ಥ ಹೊಂದಿದ್ದು, ಕ್ವಿಪ್ ಹ್ರಸ್ವಶ್ಚ ಸೂತ್ರದನ್ವಯ ಅಪ್ ಪದ ಸಿದ್ಧಿಸಿ, ನೀರು ಎಂಬರ್ಥ ಸ್ಫುರಿಸುತ್ತದೆ.
ಡುಧಾಞ್ ಧಾತು ಧಾರಣೆ ಎಂಬರ್ಥ ಹೊಂದಿದ್ದು, ಕಿಃ ಪ್ರತ್ಯಯ ಸೇರಿ, ಧಿ ಎಂದಾಗಿ, ಅಪ್+ ಧಿ > ಅಬ್ಧಿ ಪದ ಸಿದ್ಧಿಸಿ, ಸಾಗರ ಎಂಬರ್ಥ ಸ್ಫುರಿಸುತ್ತದೆ. ಅಬ್ಧಿ ಪದಕ್ಕೆ ರಕ್ಷಣೆ ಎಂಬರ್ಥದ ಪಾ ಧಾತು ಮತ್ತು ಕಃ ಪ್ರತ್ಯಯ ಸೇರಿ, ಅಬ್ಧಿಪ ಪದ ಸಿದ್ಧಿಸಿ, ವರುಣ ಎಂಬರ್ಥ ಸ್ಫುರಿಸುತ್ತದೆ.

ವೃಞ್ ಧಾತು ಸುತ್ತುವರಿ ಎಂಬರ್ಥ ಹೊಂದಿದ್ದು, ಉನನ್ ಪ್ರತ್ಯಯ ಸೇರಿ, ವರುಣ ಪದ ಸಿದ್ಧಿಸಿ, ಜಲಾಧಿದೇವತೆ, ವಿಷ್ಣು, ಸೂರ್ಯ ಮುಂತಾದ ಅರ್ಥಗಳು ಸ್ಫುರಿಸುತ್ತವೆ.

ಊರ್ಣಞ್ ಧಾತು ಮುಚ್ಚುವುದು ಎಂಬರ್ಥ ಹೊಂದಿದ್ದು, ಉಃ ಪ್ರತ್ಯಯ, ಹ್ರಸ್ವಃ ನುಲೋಪಶ್ಚ ಸೂತ್ರ, ಮತ್ತು ಙೀಷ್ ಪ್ರತ್ಯಯ ಸೇರಿ, ಉರ್ವೀ ಪದ ಸಿದ್ಧಿಸಿ, ಭೂಮಿ ಎಂಬರ್ಥ ಸ್ಫುರಿಸುತ್ತದೆ. ಕನ್ನಡದಲ್ಲಿ ಉರ್ವಿ ಎಂದಾಗಿದೆ.

ಯಜ್ ಧಾತು ದೇವಪೂಜೆ ಎಂಬರ್ಥ ಹೊಂದಿದ್ದು, ನಙ್ ಪ್ರತ್ಯಯ ಸೇರಿ, ಯಜ್ಞ ಪದ ಸಿದ್ಧಿಸಿ, ಯಾಗ, ವಿಷ್ಣು, ಅಗ್ನಿ ಎಂಬರ್ಥಗಳು ಸ್ಫುರಿಸುತ್ತವೆ.

ಓದಿದ್ದಕ್ಕಾಗಿ ಧನ್ಯವಾದಗಳು.??

ಅ.ನಾ.