ಕಣ್ಣಾಗು ಜಗಕೇಳು

ಜಾಣಮೂರ್ಖ

ಕಣ್ಣಾಗು ಜಗಕೇಳು

ಮಣ್ಣ ಮಂದಿರ ಕಟ್ಟಿ ಕಣ್ಮುಚ್ಚಿ ಕೂರಲೇನ್ ?
ಕಣ್ಣೀರನೊರೆಸೇಳು ಅದೆ ನಿಜಧ್ಯಾನ
ಮಣ್ಣಾಗುವೀ ತನುವನೊಲುಮೆಯಿಂ ಬೆಸೆಯೇಳು
ಕಣ್ಣಾಗು ಜಗಕೇಳು ಜಾಣಮೂರ್ಖ //

“ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ” ಎಂಬುದು ಎಂತಹಾ ಪಕ್ವಗೊಂಡ ನುಡಿ ! ಈ ಮಾತನ್ನು ಕೇಳುತ್ತೇವೆ , ಅರ್ಥ ಮಾಡಿಕೊಳ್ಳುತ್ತೇವೆ, ಆದರೆ ಬದುಕಲ್ಲಿ ಅಳವಡಿಸಿಕೊಳ್ಳುವುದಿಲ್ಲ ಅಷ್ಟೆ. ಕಲ್ಲು ಮಣ್ಣುಗಳಿಂದ ದೇವಸ್ಥಾನ ನಿರ್ಮಿಸುತ್ತೇವೆ. ಅದರಲ್ಲಿ ಕಣ್ಮುಚ್ಚಿ ಧ್ಯಾನಕ್ಕೆ ಕೂರುತ್ತೇವೆ. ಧ್ಯಾನವಾದರೂ ಏಕೆ ? ನೆಮ್ಮದಿಗೆ ಎಂದೇ ಉತ್ತರ ! ಅದು ಧ್ಯಾನದ ಒಂದು ರೀತಿ ಅಷ್ಟೆ. ಆದರೆ ಅಷ್ಟೇ ಧ್ಯಾನವಲ್ಲ ! ಅದೊಂದು ಇಚ್ಛಾ , ಕ್ರಿಯಾ ಹಾಗೂ ಜ್ಞಾನಾತ್ಮಕ ಕ್ರಿಯೆ ! ಮಣ್ಣ ಮಂದಿರ ಕಟ್ಟೋ ಬದಲು ನಿನ್ನ ಶರೀರವನ್ನೇ ಪ್ರೇಮಮಂದಿರವನ್ನಾಗಿಸು. ದೈವಸದೃಶವಾದ ಪ್ರೇಮದಿಂದ ಅದನ್ನು ಬೆಸೆ. ಜಗತ್ತಿನಲ್ಲಿ ನೊಂದವರ ಕಣ್ಣೀರನ್ನು ಒರೆಸು. ಶರೀರ ಶಾಶ್ವತವಲ್ಲ. ಮಣ್ಣಲ್ಲಿ ಮಣ್ಣಾಗಿ ಹೋಗುತ್ತೆ. ಇದೇ ಸತ್ಯ. ಹಾಗಾಗುವುದಕ್ಕೆ ಮುನ್ನ ಜಗತ್ತಿಗೆ ಕಣ್ಣಾಗು. ಕೈ ಹಿಡಿದು ನಡೆಸು. ಜೀವನವು ಇದರಿಂದ ಮೀರಿದ ಧ್ಯಾನಾನುಭವವನ್ನು ಪಡೆಯುತ್ತದೆ. ಇದೆಲ್ಲಾ ಹೇಳೋದು ಸುಲಭ ಆದರೆ ಅನುಸರಣೆ ಕಷ್ಟ ಎನ್ನುವಿರೇನು ? ಅದರ ದಿವ್ಯಾನುಭವವನ್ನು ಅನುಭವಿಸಿ ನೋಡಿ ನಿಮಗೇ ತಿಳಿಯುತ್ತದೆ. ಈ ಅವಕಾಶ ಎಲ್ಲರಿಗೂ ಸಿಗೋದಿಲ್ಲ. ಸಿಕ್ಕಾಗ ಉಪಯೋಗಿಸಿಕೊಳ್ಳಬೇಕು ಅಷ್ಟೆ. ಅದೇ ನಿಜವಾದ ಜೀವಶಿವಸೇವೆ. ಅಲ್ಲವೇ ಗೆಳೆಯರೇ !?
✍️ಮುರಳೀಧರ ಹೆಚ್.ಆರ್.

Total Page Visits: 338 - Today Page Visits: 1