ಸೇವಕ,ಶಪಥ,ಸನ್ನಿವೇಶ,ಮನೋಜ್ಞ

ಪದ ಚಿಂತನ

ಪದ ಚಿಂತನ

ಸೇವಕ/ಶಪಥ/ಸನ್ನಿವೇಶ/ ಮನೋಜ್ಞ

ಆಳು,ಆಣೆ ಇಡುವುದು, ಪರಿಸರ, ಮನೋಹರ ಎಂಬರ್ಥಗಳು ಕ್ರಮವಾಗಿ ಈ ಪದಗಳಿಗಿವೆ.

ಷೇವೃ ಧಾತು ಉಪಚಾರ ಎಂಬರ್ಥ ಹೊಂದಿದ್ದು, ಣ್ವುಲ್ ಪ್ರತ್ಯಯ ಸೇರಿ, ಸೇವಕ ಪದ ಸಿದ್ಧಿಸಿ, ಆಳು, ಭೃತ್ಯ ಎಂಬರ್ಥ ಸ್ಫುರಿಸುತ್ತದೆ.

ಶಪ್ ಧಾತು ಆಕ್ರೋಶ ಎಂಬರ್ಥ ಹೊಂದಿದ್ದು, ಅಥಃ ಪ್ರತ್ಯಯ ಸೇರಿ, ಶಪಥ ಪದ ಸಿದ್ಧಿಸಿ, ಆಣೆ,ಪ್ರತಿಜ್ಞೆ, ಪ್ರಮಾಣಮಾಡುವುದು ಮುಂತಾದ ಅರ್ಥಗಳು ಸ್ಫುರಿಸುತ್ತವೆ.

ವಿಶ್ ಧಾತು ಒಳಹೋಗುವುದು ಎಂಬರ್ಥ ಹೊಂದಿದ್ದು, ಸಂ+ ನಿ ಉಪಸರ್ಗಗಳು ಮತ್ತು ಘಞ್ ಪ್ರತ್ಯಯ ಸೇರಿ, ಸನ್ನಿವೇಶ ಪದ ಸಿದ್ಧಿಸಿ, ಪರಿಸರ,ಸಂದರ್ಭ, ಯೋಗ್ಯಸ್ಥಳ, ರಚನೆ, ನಗರದ ಸುತ್ತಲಿನ ಪ್ರದೇಶ ಮುಂತಾದ ಅರ್ಥಗಳು ಸ್ಫುರಿಸುತ್ತವೆ.

ಜ್ಞಾ ಧಾತು ತಿಳಿಯುವುದು ಎಂಬರ್ಥ ಹೊಂದಿದ್ದು, ಕಃ ಪ್ರತ್ಯಯ ಸೇರಿದ ನಂತರ, ಮನಸ್ ಪದದೊಡನೆ ಸೇರಿ, ಮನೋಜ್ಞ ಪದ ಸಿದ್ಧಿಸಿ, ಮನೋಹರ, ಸುಂದರ, ರಮಣೀಯ ಮುಂತಾದ ಅರ್ಥಗಳು ಸ್ಫುರಿಸುತ್ತವೆ.

ಓದಿದ್ದಕ್ಕಾಗಿ ಧನ್ಯವಾದಗಳು??

ಅ.ನಾ