ಪದ ಚಿಂತನ
ಹಸ್ತಿ/ಘನ/ಕಿಂಕರ/ಸಂತತಿ
ಆನೆ, ಶ್ರೇಷ್ಠ, ಸೇವಕ, ಪೀಳಿಗೆ ಎಂಬರ್ಥಗಳು ಕ್ರಮವಾಗಿ ಈ ಪದಗಳಿಗಿವೆ.
ಕೈ ಎಂಬರ್ಥದ ಹಸ್ತ ಪದಕ್ಕೆ ಇನಿಃ ಪ್ರತ್ಯಯ ಸೇರಿ, ಹಸ್ತಿನ್ ಪದ ಸಿದ್ಧಿಸಿ, ಗಜ,ಆನೆ ಎಂಬರ್ಥ ಸ್ಫುರಿಸುತ್ತದೆ.( ಸೊಂಡಿಲು ಹಸ್ತದಂತೆ ಇದೆ, ಎಂಬರ್ಥದಲ್ಲಿ ಹಸ್ತಿ ಪದ ಆನೆಗಿದೆ)
ಹನ್ ಧಾತು ಹಿಂಸೆ ಎಂಬರ್ಥ ಹೊಂದಿದ್ದು, ಅಪ್ ಪ್ರತ್ಯಯ ಮತ್ತು ಘನಶ್ಚಾದೇಶಃ ಸೂತ್ರದನ್ವಯ ಘನ ಪದ ಸಿದ್ಧಿಸಿ,
ಶ್ರೇಷ್ಠ, ಪೂರ್ಣ,ದೃಢ,ಮೋಡ,ಗುಂಪು,ದೇಹ ಮುಂತಾದ ಅರ್ಥಗಳು ಸ್ಫುರಿಸುತ್ತವೆ.
ಕೃಞ್ ಧಾತು ಮಾಡುವುದು ಎಂಬರ್ಥ ಹೊಂದಿದ್ದು, ಅಚ್ ಪ್ರತ್ಯಯ ಸೇರಿ ಕರ ಎಂದಾಗಿ ಇದಕ್ಕೆ ಏನು ಎಂಬರ್ಥದ ಕಿಂ ಪದ ಸೇರಿ, ಕಿಂಕರ ಪದ ಸಿದ್ಧಿಸಿ, ಸೇವಕ,ಆಳು ಎಂಬರ್ಥ ಸ್ಫುರಿಸುತ್ತದೆ. ( ಏನು ಮಾಡಬೇಕು, ಏನು ಮಾಡಬೇಕು ಎಂದು ಕೇಳಿ ಕೆಲಸ ಮಾಡುತ್ತಿದ್ದರಿಂದ ಅನ್ವರ್ಥವಾದ ಕಿಂಕರ ಪದ ಸೇವಕ ಪದಕ್ಕಿದೆ.)
ತನು ಧಾತು ವ್ಯಾಪ್ತಿ ಎಂಬರ್ಥ ಹೊಂದಿದ್ದು, ಸಂ ಉಪಸರ್ಗ ಮತ್ತು ಕ್ತಿನ್ ಪ್ರತ್ಯಯ ಸೇರಿ, ಸಂತತಿ ಪದ ಸಿದ್ಧಿಸಿ, ಕುಲ,ಪೀಳಿಗೆ,ವಂಶ, ಗೋತ್ರ, ಸಂತಾನ, ನಿರಂತರತೆ ಮುಂತಾದ ಅರ್ಥಗಳು ಸ್ಫುರಿಸುತ್ತವೆ.
ಓದಿದ್ದಕ್ಕಾಗಿ ಧನ್ಯವಾದಗಳು.??
ಅ.ನಾ.