ಪದ ಚಿಂತನ
ಕುಂಭಸಂಭವ/ ಕನಕಪಾತ್ರ/ಉಪಾಯ/ಮೃತ್ಪಾತ್ರ
ದ್ರೋಣ, ಚಿನ್ನದಪಾತ್ರೆ,ಯುಕ್ತಿ, ಮಣ್ಣಿನಪಾತ್ರೆ ಎಂಬರ್ಥಗಳು ಕ್ರಮವಾಗಿ ಈ ಪದಗಳಿಗಿವೆ.
ಉಂಭ್ ಧಾತು ತುಂಬುವುದು ಎಂಬರ್ಥ ಹೊಂದಿದ್ದು, ಶಬ್ದ ಎಂಬರ್ಥದ ಕುಂ ಪದ ಮತ್ತು ಅಣ್ ಪ್ರತ್ಯಯ ಸೇರಿ, ಕುಂಭ ಪದ ಸಿದ್ಧಿಸಿ, ಮಣ್ಣಿನ ಗಡಿಗೆ,ಬಿಂದಿಗೆ ಎಂಬರ್ಥ ಸ್ಫುರಿಸುತ್ತದೆ.
ಭೂ ಧಾತು ಇರುವಿಕೆ ಎಂಬರ್ಥ ಹೊಂದಿದ್ದು, ಸಂ ಉಪಸರ್ಗ ಮತ್ತು ಅಪ್ ಪ್ರತ್ಯಯ ಸೇರಿ, ಸಂಭವ ಪದ ಸಿದ್ಧಿಸಿ, ಉತ್ಪತ್ತಿ, ಜನ್ಮತಾಳುವುದು ಎಂಬರ್ಥ ಸ್ಫುರಿಸುತ್ತದೆ. ಕುಂಭಸಂಭವ ಸಮಸ್ತಪದವು ದ್ರೋಣ, ಅಗಸ್ತ್ಯಮಹರ್ಷಿ,ವಸಿಷ್ಠಮಹರ್ಷಿ ಎಂಬರ್ಥಗಳನ್ನು ಹೊಂದಿದೆ.
ಕನಿ ಧಾತು ದೀಪ್ತಿ ಎಂಬರ್ಥ ಹೊಂದಿದ್ದು, ವುನ್ ಪ್ರತ್ಯಯ ಸೇರಿ, ಕನಕ ಪದ ಸಿದ್ಧಿಸಿ, ಚಿನ್ನ ಎಂಬರ್ಥ ಸ್ಫುರಿಸುತ್ತದೆ. ಪಾ ಧಾತು ಕುಡಿಯುವುದು ಎಂಬರ್ಥ ಹೊಂದಿದ್ದು, ಷ್ಟ್ರನ್ ಪ್ರತ್ಯಯ ಸೇರಿ, ಪಾತ್ರ ಪದ ಸಿದ್ಧಿಸಿ,ಅಡುಗೆಯ ಪಾತ್ರೆ ಎಂಬರ್ಥ ಸ್ಫುರಿಸುತ್ತದೆ. ಕನಕಪಾತ್ರ ಸಮಸ್ತಪದವು ಚಿನ್ನದಪಾತ್ರೆ ಎಂಬರ್ಥ ಸ್ಫುರಿಸುತ್ತದೆ.
ಅಯ ಧಾತು ಚಲನೆ ಎಂಬರ್ಥ ಹೊಂದಿದ್ದು, ಉಪ ಉಪಸರ್ಗ ಮತ್ತು ಘಞ್ ಪ್ರತ್ಯಯ ಸೇರಿ, ಉಪಾಯ ಪದ ಸಿದ್ಧಿಸಿ, ಯುಕ್ತಿ, ಕಾರ್ಯಯೋಜನೆ, ಹತ್ತಿರಕ್ಕೆ ಬರುವುದು, ಸಲಕರಣೆ ಎಂಬರ್ಥಗಳು ಸ್ಫುರಿಸುತ್ತವೆ.
ಮೃದ ಧಾತು ಅರೆಯುವುದು ಎಂಬರ್ಥ ಹೊಂದಿದ್ದು, ಕ್ವಿಪ್ ಪ್ರತ್ಯಯ ಸೇರಿ, ಮೃದ್ ಪದ ಸಿದ್ಧಿಸಿ, ಮಣ್ಣು ಎಂಬರ್ಥ ಸ್ಫುರಿಸುತ್ತದೆ. ಮೃದ್ ಪದಕ್ಕೆ ಪಾತ್ರ ಪದ ಸೇರಿ, ಮೃತ್ಪಾತ್ರ ಪದ ಸಿದ್ಧಿಸಿ, ಮಣ್ಣಿನಪಾತ್ರೆ ಎಂಬರ್ಥ ಸ್ಫುರಿಸುತ್ತದೆ.
ಓದಿದ್ದಕ್ಕಾಗಿ ಧನ್ಯವಾದಗಳು.??
ಅ.ನಾ.