ಪದ ಚಿಂತನ

ಪದ ಚಿಂತನ
www.esirikannada.com

***ಭಕ್ಷ್ಯ / ಭೋಜ್ಯ- :****

ಗಣಪತಿ ಹಬ್ಬದಲ್ಲಿ ದೇವರ ನೈವೇದ್ಯಕ್ಕೆ ಭಕ್ಷ್ಯ, ಭೋಜ್ಯಗಳನ್ನು ಇಟ್ಟು ಪೂಜೆ ಸಲ್ಲಿಸುವುದು ಪರಂಪರೆಯಿಂದಲೂ ನಡೆದು ಬಂದಿದೆ. ಭಕ್ಷ್ಯ ಅಂದರೆ ತಿಂಡಿ, ಗಟ್ಟಿ ಆಹಾರ. ಭಕ್ಷ್ ಧಾತು ತಿನ್ನುವುದು ಎಂಬರ್ಥ ಹೊಂದಿದ್ದು ಯ ಪ್ರತ್ಯಯ ಸೇರಿ ಭಕ್ಷ್ಯ ಎಂದಾದಾಗ ತಿಂಡಿ ಅರ್ಥವನ್ನು ಹೊಂದುತ್ತದೆ. ಚಕ್ಕುಲಿ,ಕೋಡುಬಳೆ, ದೋಸೆ,ರೊಟ್ಟಿ ಮುಂತಾದವು ಭಕ್ಷ್ಯಗಳು. ಭೋಜ್ಯ ಎಂದರೆ ಆಹಾರ, ಅನ್ನ, ತಿನ್ನಲು ಅರ್ಹವಾದದ್ದು ಎಂಬರ್ಥಗಳಿವೆ. ಭುಜ್ ಧಾತು ತಿನ್ನುವ,ಊಟಮಾಡುವ ಎಂಬರ್ಥ ಹೊಂದಿದ್ದು, ಯ ಪ್ರತ್ಯಯ ಸೇರಿ ಭೋಜ್ಯ ಎಂದಾದಾಗ ಅನ್ನ , ಹಬ್ಬದ ಊಟ ಮೊದಲಾದ ಅರ್ಥಗಳು ಸ್ಫುರಿಸುತ್ತದೆ. ಓದಿದ್ದಕ್ಕಾಗಿ ಧನ್ಯವಾದಗಳು.🙏🙏🙏🙏🙏💐🌺🌻🌹🌸 ****ಅ.ನಾ.*****

www.esirikannada.com

***ಅಂತಾರಾಷ್ಟ್ರೀಯ:--- :****

ವಿಭಿನ್ನ ಎರಡು ರಾಷ್ಟ್ರಗಳ ನಡುವಿನ ಸಂಬಂಧ ಸೂಚಿಸಲು ಈ ಪದ ಬಳಸುತ್ತೇವೆ. ಅಂತಾರಾಷ್ಟ್ರೀಯ ಎನ್ನುವುದು ವ್ಯಾಕರಣ ಬದ್ಧಪದ. ಆದರೆ ಕನ್ನಡದಲ್ಲಿ ಅಂತರರಾಷ್ಟ್ರೀಯ/ ಅಂತರ್ರಾಷ್ಟ್ರೀಯ ಎಂಬ ಎರಡು ರೂಪಗಳು ಚಾಲ್ತಿಯಲ್ಲಿದೆ. "ಎರಡು ರೇಫೆಗಳು ಸಂಧಿಸಿದಾಗ ಪೂರ್ವಪದದ ರೇಫೆಯು ಲೋಪವಾಗಿ ಅದರ ಹಿಂದಿನ ಹ್ರಸ್ವಸ್ವರ ದೀರ್ಘವಾಗುತ್ತದೆ" ಎಂಬ ವಿಸರ್ಗಸಂಧಿ ನಿಯಮದಂತೆ ಅಂತರ್+ ರಾಷ್ಟ್ರೀಯ ಅಂತಾ+ ರಾಷ್ಟ್ರೀಯ> ಅಂತಾರಾಷ್ಟ್ರೀಯ ಎಂಬ ಪದ ಸಿದ್ಧಿಸುತ್ತದೆ. ಇದರಂತೆ ಪುನಾರಚನೆ, ಅಂತಾರಾಜ್ಯ ಪದಗಳು ಕೂಡ ಸರಿರೂಪಗಳು. ಇವುಗಳನ್ನು ಪುನರ್ರಚನೆ,ಅಂತರ್ರಾಜ್ಯ ಎಂದು ಬರೆಯುವಂತಿಲ್ಲ. ಇದೇ ನಿಯಮದ "ನೀರಸ" ಪದವನ್ನು ಮಾತ್ರ ಎಲ್ಲರೂ ಒಪ್ಪಿಕೊಂಡಿದ್ದೇವೆ. ನಿರ್+ ರಸ> ನೀ+ ರಸ> ನೀರಸ. ಇದನ್ನು ಅನುಸರಿಸಿ ಪುನಾರಂಭ ಎಂಬ ತಪ್ಪುಪದ ಬಳಕೆಗೆ ಬಂದಿದೆ. ಇದು ಪುನರ್+ ಆರಂಭ> ಪುನರಾರಂಭ ಎಂದಾಗಬೇಕು. ಸರಿ ರೂಪ ತಿಳಿದಿರೋಣ. ಓದಿದ್ದಕ್ಕಾಗಿ ಧನ್ಯವಾದಗಳು.🙏🙏🙏🙏🙏🌹💐🌷🌸 ***ಅ.ನಾ.*****

www.esirikannada.com

***ಕೂಲಂಕಷ:-- :****

ಈ ಪದಕ್ಕೆ ಸಮಗ್ರವಾದ ಎಂಬರ್ಥವನ್ನು ಹೇಳುತ್ತೇವೆ. ಈ ಪದವನ್ನು ಕೂಲಂಕುಶ/ ಕೂಲಂಕುಷ ಹೀಗೆ ತಪ್ಪಾಗಿ ಬರೆಯುವುದೂ ಉಂಟು. ಮೂಲತಃ ಕೂಲಂಕಷ ಪದಕ್ಕೆ ದಡವನ್ನು ಉಜ್ಜುವ,ಕೊರೆಯುವ ಎಂದರ್ಥ. ಹಾಗಾಗಿ ಸಮದ್ರಕ್ಕೆ ಕೂಲಂಕಷ, ನದಿಗಳಿಗೆ ಕೂಲಂಕಷಾ ಎನ್ನುತ್ತಾರೆ. ಕೂಲಂ ಎಂದರೆ ದಡ, ಕಷ ಅಂದರೆ ಉಜ್ಜುವುದು( ಕೊರೆಯುವುದು) ಎಂದರ್ಥ. ನದಿಯು ಹರಿಯುವಾಗ ಎರಡೂ ದಡಗಳನ್ನು ಉಜ್ಜುವುದರಿಂದ ಎರಡೂ ದಡಗಳ ಅಂತರಕ್ಕೆ ಸಮಗ್ರವಾದ ಎಂಬರ್ಥವೂ ಹುಟ್ಟಿಕೊಂಡಿದೆ ಮತ್ತು ಇದೇ ಅರ್ಥ ವ್ಯಾಪಕವಾಗಿ ಹಬ್ಬಿ ಮೂಲಾರ್ಥವನ್ನು ಮಸುಕು/ಮಸಕು ಮಾಡಿದೆ. ನಮಗೆ ಮಾಹಿತಿ ಮರೆಯದಿರಲೆಂದು ನೆನಪಿಸುತ್ತಿದ್ದೇನೆ. ಓದಿದ್ದಕ್ಕಾಗಿ ಧನ್ಯವಾದಗಳು.🙏🙏🙏🙏🙏🙏🌷🌹💐🌻🌺 ***ಅ.ನಾ.****

www.esirikannada.com

***ಸುಸ್ವಾಗತ :-****

ಸುಖವಾದ ಆಗಮನವನ್ನು ಬಯಸಲು ಸುಸ್ವಾಗತ ಪದವನ್ನು ಬಳಸುತ್ತೇವೆ. ಬಂಧುಗಳು,ಅತಿಥಿಗಳು,ಮಿತ್ರರು, ರಾಜಕಾರಣಿಗಳು,ಅಧಿಕಾರಿಗಳು ಬಂದಾಗ ಮತ್ತು ಕಾರ್ಯಕ್ರಮಗಳಲ್ಲಿ ಈ ಮಾತನ್ನು ಹೇಳುವುದು ರೂಢಿಯಲ್ಲಿದೆ. ಸ್ವಾಗತ ಎಂಬ ಪದವು ಈ ಅರ್ಥವನ್ನು ನೀಡುವುದಾಗಿದೆ. ಗಮ ಎಂಬ ಧಾತುವಿಗೆ ಭಾವಾರ್ಥದಲ್ಲಿ ತ ಪ್ರತ್ಯಯ ಆದೇಶವಾಗಿ ಗಮ> ಗತ ಎಂದಾಗುತ್ತದೆ. ಅರ್ಥ ಚಲಿಸು, ಮುಂದೆ ಹೊರಟ. ಇದಕ್ಕೆ ಉಪಸರ್ಗ ಆ ಸೇರಿ ಆಗತ ಎಂದು ಪದವಾಗಿ, ಬರುವಿಕೆ, ಆಗಮನ ಎಂಬರ್ಥಗಳಿವೆ. ಮತ್ತೆ ಆಗತ ಪದಕ್ಕೆ ಸು ಉಪಸರ್ಗ ಸೇರಿ ಸು+ ಆಗತ> ಸ್ವಾಗತ( ಸುಖದ ಆಗಮನ ಕೋರುವುದು) ಎಂಬ ಪದ ಉಂಟಾಗುತ್ತದೆ. ಒಂದು ಧಾತುವಿಗೆ ಒಂದೇ ಉಪಸರ್ಗವನ್ನು ಎರಡು ಬಾರಿ ಸೇರಿಸುವಂತಿಲ್ಲ. ಬೇರೆ ಬೇರೆ ಆದರೆ ಎರಡು ಉಪಸರ್ಗ ಸೇರಬಹುದು. ಸು+ ಸು+ ಆಗತ> ಸುಸ್ವಾಗತ ಎಂದು ಹೇಳುವುದಿಲ್ಲ. ಆದರೆ ಕನ್ನಡದಲ್ಲಿ ನಾವು ಸುಸ್ವಾಗತ ಎಂಬ ಪದವನ್ನು ರೂಢಿ ಮಾಡಿದ್ದೇವೆ. ಮೂಲರೂಪ ನಮಗೆ ತಿಳಿದಿರಲೆಂದು ಈ ಚಿಂತನೆ. ಓದಿದ್ದಕ್ಕಾಗಿ ಧನ್ಯವಾದಗಳು.🙏🙏🙏🙏🙏🙏💐🌹🌻🌸🌺

www.esirikannada.com

***ಆದರ್ಶ::-****

ಆದರ್ಶ: ಉತ್ತಮ ಗುಣಗಳನ್ನು ಪಡೆದು, ಮಾದರಿಯಾದವರನ್ನು ಆದರ್ಶ ವ್ಯಕ್ತಿ ಎನ್ನುತ್ತೇವೆ. ಆದರ್ಶದಲ್ಲಿ ಸತ್ಯ ಮೇಳೈಸಿರುತ್ತದೆ. ಶಿಷ್ಯರಿಗೆ ಶಿಕ್ಷಕರು ಆದರ್ಶವಾಗಿರುತ್ತಾರೆ. ಆದರ್ಶ ಪದದ ಮೂಲಾರ್ಥ ಕನ್ನಡಿ. ದೃಶಿರ್ ಧಾತು ಉತ್ತಮ ವೀಕ್ಷಣೆ ಎಂಬರ್ಥ ಹೊಂದಿದೆ. ಪ್ರತ್ಯಯ ಅ ಸೇರಿದಾಗ ಧಾತುವಿನ ಅಂತ್ಯಾಕ್ಷರ ಸ್ವರಸಹಿತ ಲೋಪವಾಗಿ ದೃಶ್+ ಅ> ದರ್ಶ್+ ಅ> ದರ್ಶ ಎಂದಾಗುತ್ತದೆ. ಇದಕ್ಕೆ ಉಪಸರ್ಗ ಆ ಸೇರಿ ಆದರ್ಶ ಪದ ಸಿದ್ಧಿಸಿದೆ. ಉತ್ತಮ ವೀಕ್ಷಣೆ ಮಾಡಿಸುವುದರಿಂದ ಕನ್ನಡಿಗೆ ಆದರ್ಶ ಎಂಬ ಹೆಸರು ಬಂದಿದೆ. ಸತ್ಯವನ್ನು ಮಾತ್ರ ತೋರಿಸುವ ಕನ್ನಡಿ ಗುಣಗ್ರಾಹಿ. ಇಂತಹ ಗುಣವಂತರೆ ಆದರ್ಶ ವ್ಯಕ್ತಿಗಳು. ಆದರ್ಶ ಗುಣಗಳನ್ನು ಸಮಾಜದಲ್ಲಿ ಬಿತ್ತುವವರು ಗುರು ಸ್ಥಾನದಲ್ಲಿರುವ ಶಿಕ್ಷಕರು. ಸಮಾಜಕ್ಕೆ ಶಿಕ್ಷಕರೇ ನಿಜವಾದ ಆದರ್ಶ. ಓದಿದ್ದಕ್ಕಾಗಿ ಧನ್ಯವಾದಗಳು.🙏🙏🙏🙏💐🌸🌹🌷🌻🌺 ****ಅ.ನಾ.*****

www.esirikannada.com

***ಸೌಹಾರ್ದ/ ಸೌಹಾರ್ದ್ಯ:-****

ಹೃ ಧಾತು ಒಯ್ಯುವುದು, ಸಾಗಿಸುವುದು ಎಂಬರ್ಥವಿದೆ. ತ್( ದ್) ಎಂಬ ಪ್ರತ್ಯಯ ಸೇರಿ ಹೃ+ ತ್( ದ್)> ಹೃದ್ ಎಂಬ ಪದವುಂಟಾಗಿ ಮನಸ್ಸು, ಹೃದಯ ಎಂಬರ್ಥ ಬರುತ್ತದೆ. ಹೃದಯ ಏನೇನು ಸಾಗಿಸುತ್ತದೆ ಎಂಬುದು ತಿಳಿದ ವಿಷಯವಷ್ಟೆ! ಹೃದ್ ಪದಕ್ಕೆ ಸು ಉಪಸರ್ಗ ಸೇರಿದಾಗ ಸು+ ಹೃದ್> ಸುಹೃದ್ ಎಂದಾಗಿ ಗೆಳೆಯ, ಸ್ನೇಹಿತ, ಮಿತ್ರ ಎಂಬರ್ಥ ಸ್ಫುರಿಸುತ್ತದೆ. ಸುಹೃದ್ ಪದಕ್ಕೆ ಭಾವಾರ್ಥದಲ್ಲಿ ಅ ಪ್ರತ್ಯಯ ಸೇರಿದರೆ ಸುಹೃದ್+ಅ > ಸೌಹಾರ್ದ ಯ ಪ್ರತ್ಯಯ ಸೇರಿದರೆ ಸುಹೃದ್+ ಯ> ಸೌಹಾರ್ದ್ಯ ಎಂದಾಗಿ ಸ್ನೇಹಭಾವ, ಸೌಜನ್ಯ, ಸಹೃದಯತೆ ಎಂಬ ಅರ್ಥ ಸ್ಫುರಿಸುತ್ತದೆ. ಬಾಳಿನಲ್ಲಿ ಸೌಹಾರ್ದ ಬಂಧವನ್ನು ಬೆಸೆಯುತ್ತದೆ. ಸೌಹಾರ್ದದಿಂದ ಓದಿದ್ದಕ್ಕಾಗಿ ಧನ್ಯವಾದಗಳು.🙏🙏🙏🙏🙏💐🌹🌷🌸🌺🌻 ****ಅ.ನಾ.*****

www.esirikannada.com

***ನಯನ/ ನೇತ್ರ:-****

ಕಣ್ಣು ಎಂಬರ್ಥವುಳ್ಳ ಈ ಎರಡೂ ಪದಗಳು ಸುಂದರವಾದ ಶಬ್ದಗಳಾಗಿವೆ. ಹೆಣ್ಣುಮಕ್ಕಳಿಗೆ ಈ ಹೆಸರಿಡುವುದು ಆಕರ್ಷಣೀಯ. ನೀ ಎಂಬ ಧಾತು ಕರೆದೊಯ್ಯುವುದು ಎಂಬರ್ಥ ಹೊಂದಿದ್ದು ವಿಕರಣ ಪ್ರತ್ಯಯ ಅ ಸೇರಿದಾಗ ನೀ+ ಅ ನೇ+ಅ >(ಧಾತುವಿಗೆ ಗುಣ) ನಯ್+ಅ( ಯಾಂತವಾಂತಾದೇಶ) ನಯ+ ನ( ಪ್ರತ್ಯಯ)> ನಯನ. ಹಾಗೇ ನೇ+ ತ್ರ> ನೇತ್ರ. ಕಣ್ಣು ನಮ್ಮನ್ನು ಕರೆದೊಯ್ಯುವುದರಿಂದ ಅದಕ್ಕೆ ನಯನ/ ನೇತ್ರ ಎಂಬ ಅನ್ವರ್ಥ ಹೆಸರಿದೆ. ಹಾಗೇ ಹೆಣ್ಣು ಸಹ ತನ್ನವರನ್ನು ಸನ್ಮಾರ್ಗದಲ್ಲಿ ಕರೆದೊಯ್ಯುವುದರಿಂದ ನಯನ/ನೇತ್ರ ಎಂಬ ಅಂಕಿತನಾಮ ಸ್ತ್ರೀಗೆ ಅನ್ವರ್ಥನಾಮವಾಗಿಯೂ ಇದೆ. ಓದಿದ್ದಕ್ಕಾಗಿ ಧನ್ಯವಾದಗಳು.🙏🙏🙏🙏🙏🙏🌹🌺🌸💐🌷🌻 ****ಅ.ನಾ.*****

www.esirikannada.com

***ಪುತ್ತಲಿ( ಳಿ)::-****

ಗೊಂಬೆ,ವಿಗ್ರಹ, ಪ್ರತಿಮೆ ಎಂಬರ್ಥದ ಪುತ್ತಲಿ(ಳಿ) ಪದವನ್ನು ಪುತ್ಥಳಿ ಎಂದು ತಪ್ಪಾಗಿ ಬರೆಯಲಾಗುತ್ತಿದೆ. ಪುತ್ತಳಿಯನ್ನು ಮಣ್ಣು,ಹುಲ್ಲು,ಕಲ್ಲು,ಕಡ್ಡಿ,ಮರ, ಲೋಹಗಳಿಂದ ಮಾಡಲಾಗುತ್ತದೆ. ಪುತ್ತ ಅಂದರೆ ಗಮನ. ಲಾ ಅಂದರೆ ಆಕರ್ಷಣೆ. ಪುತ್ತ+ ಲಾ ( ಈ ಪ್ರತ್ಯಯ ಸೇರಿ ಲೀ) ಪುತ್ತ+ ಲೀ> ಪುತ್ತಲೀ. ಗಮನವನ್ನು ಆಕರ್ಷಿಸುವುದು( ಸೆಳೆಯುವುದು) ಎಂಬರ್ಥ ಸ್ಫುರಿಸುತ್ತದೆ. ಗಮನವನ್ನು ಸೆಳೆಯುವ ಕಾರಣದಿಂದ ಗೊಂಬೆಗೆ ಪುತ್ತಲೀ ಎನ್ನುತ್ತಾರೆ. ಕನ್ನಡದಲ್ಲಿ ಪುತ್ತಳಿ ಆಗಿದೆ. ಪುತ್ಥಳಿ ಎಂಬ ಪದ ವ್ಯಾಕರಣ ಮತ್ತು ಅರ್ಥಬದ್ಧ ಪದವಲ್ಲ. ಮೂಲರೂಪದ ಕಲ್ಪನೆ ನಮಗಿರಬೇಕೆಂದು ಈ ಚಿಂತನ. ಓದಿದ್ದಕ್ಕಾಗಿ ಧನ್ಯವಾದಗಳು.🙏🙏🙏🙏🙏🌸🌺🌷🌹💐🌻 ****ಅ.ನಾ.*****

www.esirikannada.com

***ನಳಂದ( ನಾಲಂದಾ):-****

ಭಾರತದ ಐತಿಹಾಸಿಕ ವಿಶ್ವವಿದ್ಯಾನಿಲಯದ ಹೆಸರು ನಳಂದ ಎಂಬುದು ಭಾರತೀಯರಿಗೆ ಚಿರಪರಿಚಿತ ಹೆಸರು. ಅಂದಿನ ಕಾಲದಲ್ಲಿ ಹೊರದೇಶದವರೆಗೂ ಅದರ ಕೀರ್ತಿ ವ್ಯಾಪಿಸಿತ್ತು. ಇದರ ಮೂಲರೂಪ ನಾಲಂದಾ ವಿಶ್ವವಿದ್ಯಾಲಯ. ಅನ್ವರ್ಥ ನಾಮಕ್ಕೆ ಹೆಸರಾಗಿತ್ತು. ಅಲಂ ಎನ್ನುವುದು ಒಂದು ಅವ್ಯಯ ಸಾಕು ಎಂದರ್ಥ. ಇದಕ್ಕೆ ನಿಷೇಧಾರ್ಥದ ನ ಪ್ರತ್ಯಯ ಸೇರಿ ನ+ ಅಲಂ> ನಾಲಂ, ಸಾಕಾಗುವುದಿಲ್ಲ ಎಂಬರ್ಥ ಬರುತ್ತದೆ. ದಾ ಎಂದರೆ ನೀಡುವುದು. ಉತ್ಕೃಷ್ಟವಾದ ವಿದ್ಯಾದಾನವನ್ನು ವಿಶ್ವವಿದ್ಯಾಲಯ ನೀಡುತ್ತಿತ್ತು, ಆದರೂ ಜ್ಞಾನ ದಾಹಿಗಳಾದ ವಿದ್ಯಾರ್ಥಿಗಳು ತಮ್ಮ ಗುರುಗಳನ್ನು ಕುರಿತು" ನೀವು ನೀಡುವುದು ಸಾಲುವುದಿಲ್ಲ"( ನ ಅಲಂ ದಾ) ಎಂದು ಹೇಳುತ್ತಿದ್ದರಂತೆ. ಅಂದಿನಿಂದ ಆ ವಿಶ್ವವಿದ್ಯಾಲಯಕ್ಕೆ ಅನ್ವರ್ಥನಾಮವಾಗಿ ನಾಲಂದಾ ಎಂಬ ಹೆಸರು ಸ್ಥಿರವಾಯಿತು. ಈಗ ಅದು ಅಪಭ್ರಂಶವಾಗಿ ನಳಂದ ಎಂಬ ಹೆಸರಿನಿಂದ ಗುರುತಿಸಲ್ಪಡುತ್ತಿದೆ. ಐತಿಹಾಸಿಕ ವಿಶ್ವವಿದ್ಯಾಲಯದ ಬಗೆಗಿನ ಸಂಗತಿ, ಮತ್ತು ಅದು ಹೇಗೆ ಜ್ಞಾನಪಿಪಾಸುಗಳ ಆಗರವಾಗಿತ್ತು ಎಂಬುದನ್ನು ತಿಳಿಸಲೆಂದು ಈ ಚಿಂತನ. ಓದಿದ್ದಕ್ಕಾಗಿ ಧನ್ಯವಾದಗಳು.🙏🙏🙏🙏🙏🙏🌹💐🌺🌷🌻 ***ಅ.ನಾ.****

www.esirikannada.com

***ಉಪಾಧ್ಯಾಯ:-****

ಜೀವನ ನಿರ್ವಹಣೆಗಾಗಿ ವಿದ್ಯೆ ಕಲಿಸುವವನು. ಶಿಕ್ಷಣ ನೀಡುವವನು ಎಂಬರ್ಥವನ್ನು ಉಪಾಧ್ಯಾಯ ಪದ ಹೊಂದಿರುವುದು ನಿಘಂಟುಗಳಲ್ಲಿ ಕಂಡುಬರುತ್ತದೆ. ಆದರೆ ಉಪಾಧ್ಯಾಯ ಪದಕ್ಕೆ ಇನ್ನೂ ವಿಶಾಲಾರ್ಥವೇ ಇದೆ. ಅಯ ಎಂಬ ಧಾತುವಿಗೆ ಚಲನೆ,ವಿಷಯದ ಕಡೆ ಗಮನ ಎಂಬರ್ಥಗಳಿದ್ದು ಅಧಿ ಉಪಸರ್ಗ ಸೇರಿ, ಅಧಿ+ ಅಯ+ ಧಞ್( ಅ) ಪ್ರತ್ಯಯ ಸೇರಿ ಅಧಿ+ ಆಯ(ಧಾತುವಿನ ಅಂತ್ಯ ಸ್ವರ ಲೋಪ ಮತ್ತು ಪ್ರತ್ಯಯವು ಅಂತ್ಯಕ್ಕೆ ಸೇರಿ ಆದಿ ದೀರ್ಘ) ಅಧ್ಯಾಯ ಎಂದಾಗುತ್ತದೆ. ಇದರರ್ಥ ವ್ಯಾಸಂಗ, ಅಧ್ಯಯನ. ಉಪ ಎಂದರೆ ಸಾಮೀಪ್ಯ, ಅಧಿಕ ಎಂಬರ್ಥಗಳಿವೆ. ಉಪ+ ಅಧ್ಯಾಯ> ಉಪಾಧ್ಯಾಯ ಅಧಿಕವಾದ ಅಧ್ಯಯನದ ಸಾಮೀಪ್ಯ ಇರುವವನು ಉಪಾಧ್ಯಾಯ. ನಿರಂತರ ಅಧ್ಯಯನಶೀಲನಾದವನು ಉಪಾಧ್ಯಾಯ. ಕಲಿತದ್ದನ್ನು ವಿದ್ಯಾರ್ಥಿಗಳಿಗೆ ವರ್ಗಾಯಿಸಿ ಜ್ಞಾನ ತುಂಬುವವನು ಉಪಾಧ್ಯಾಯ. ಉಪಾಧ್ಯಾಯ ಪದವು ವಿಶಾಲವಾದ ಅರ್ಥವನ್ನು ಪಡೆದುಕೊಂಡಿದೆ. ಈ ಪದವು ಅನ್ವರ್ಥವಾಗಬೇಕಾಗಿರುವುದು ಶಿಕ್ಷಕರ ಕೈಯಲ್ಲೇ ಇದೆ. ಓದಿದ್ದಕ್ಕಾಗಿ ಧನ್ಯವಾದಗಳು. 🙏🙏🙏🙏🙏💐🌹🌺🌸🌷 ****ಅ.ನಾ.****

www.esirikannada.com

***ರೂಪುರೇಷೆ/ ರೂಪುರೇಖೆ:-****

ಯೋಜನೆಗಳ ಸ್ಥೂಲ ಆಕಾರವನ್ನು ತಿಳಿಸಲು ರೂಪುರೇಷೆ ಎಂಬ ಪದ ಉಪಯೋಗಿಸಲಾಗುತ್ತಿದೆ. ಇದನ್ನು ವಿಶ್ಲೇಷಿಸಿದರೆ ನಾವು ತಿಳಿದಿದ್ದ ಅರ್ಥ ಸ್ಫುರಿಸುವುದಿಲ್ಲ. ರೇಷ ಎಂಬ ಪದದ ಅರ್ಥ ಹಿಂಸಿಸುವುದು. ಕನ್ನಡದಲ್ಲಿ ಅದು ರೇಷೆ ಆಗಿದೆ. ರೂಪುರೇಷೆ ಅಂದರೆ ರೂಪವನ್ನು ಹಿಂಸಿಸುವುದು ಎಂಬ ಅರ್ಥ ಸ್ಫುರಿಸುತ್ತದೆ. ಒಂದು ಕಾರ್ಯದ ಬಾಹ್ಯ ರೇಖೆಯನ್ನು ತಿಳಿಸುವುದು ಎಂಬರ್ಥ ಈ ಪದದಿಂದ ಸ್ಫುರಿಸುವುದಿಲ್ಲ. ರೂಪರೇಖೆ ಎಂಬ ಪದವು ಕಾರ್ಯದ ಸ್ಥೂಲರೂಪವನ್ನು ತಿಳಿಸುವ ಸರಿಯಾದ ಪದವಾಗಿದೆ. ಬಾಹ್ಯ ರೇಖೆಯೇ ರೂಪರೇಖೆ. ಹಾಗಾಗಿ ರೂಪುರೇಷೆ/ ರೂಪರೇಖೆ ಎಂಬ ಎರಡು ಪದಗಳಲ್ಲಿ ಯಾವುದನ್ನು ಉಪಯೋಗಿಸಿದರೆ ಅರ್ಥಬದ್ಧ ಎಂಬುದನ್ನು ನೀವೇ ನಿರ್ಧರಿಸಿ. ಓದಿದ್ದಕ್ಕಾಗಿ ಧನ್ಯವಾದಗಳು.🙏🙏🙏🙏🙏🌹💐🌺🌻🌸🌷 ****ಅ.ನಾ.*****

www.esirikannada.com

***ಕುಂಭದ್ರೋಣವರ್ಷ/ ಮುಸಲಧಾರೆ:-****

ಕುಂಭದ್ರೋಣವರ್ಷ/ ಮುಸಲಧಾರೆ ಧಾರಾಕಾರ ಜೋರಾದ ಮಳೆಗೆ ಹೀಗೆ ಕರೆಯುತ್ತೇವೆ. ಕುಂಭ ಎಂದರೆ ಲೋಹ/ ಮಣ್ಣು ಗಳ ಬಿಂದಿಗೆ. ೨೦ ಕೊಳಗದ ಅಳತೆ ಎಂಬರ್ಥವೂ ಇದೆ. ಹಾಗೇ ದ್ರೋಣ ಎಂದರೆ ನೀರು ತುಂಬುವ ಮರದ ಪಾತ್ರೆ. ೨೨ ಸೇರಿನ ಅಳತೆ ಎಂದಿದೆ. ಹೀಗೆ ಕುಂಭ ಮತ್ತು ದ್ರೋಣಗಳ ನೀರು ಒಮ್ಮೆಲೆ ಸುರಿದರೆ ನೀರು ಧಾರಾಕಾರವಾಗಿ ಬೀಳುತ್ತದೆ. ಮಳೆಯ ಬಿರುಸು ಮತ್ತು ಆಧಿಕ್ಯವನ್ನು ಸೂಚಿಸಲು, ಎಡಬಿಡದೆ ಸುರಿಯುವ ಮಳೆಗೆ ಕುಂಭದ್ರೋಣ ವರ್ಷ ಎನ್ನುತ್ತಾರೆ. ಮುಸಲ ಅಂದರೆ ವನಕೆ. ವನಕೆ ಗಾತ್ರದಷ್ಟು ನೀರು ಸುರಿಯುವುದನ್ನು ಮುಸಲ ಧಾರೆ ಎನ್ನುತ್ತಾರೆ. ಮುಸಲಧಾರೆ ಪದವೂ ಜೋರಾದ ಮಳೆಯನ್ನು ಸೂಚಿಸುವ ಪದವಾಗಿದೆ. ಓದಿದ್ದಕ್ಕಾಗಿ ಧನ್ಯವಾದಗಳು.🙏🙏🙏🙏🌷🌺🌸🌹🌻 ****ಅ.ನಾ.*****

www.esirikannada.com

***ಸದಾಚಾರ:-****

ಉತ್ತಮ ನಡವಳಿಕೆ ಎಂದು ಈ ಪದಕ್ಕೆ ಅರ್ಥ ಹೇಳುತ್ತೇವೆ. ಈ ಪದ ತನ್ನೊಳಗೆ ವ್ಯಾಪಕವಾದ ಅರ್ಥವನ್ನು ಹಿಡಿದಿಟ್ಟುಕೊಂಡಿದೆ. ಚರ್ ಧಾತು ಚಲನೆ ಎಂಬರ್ಥ ಹೊಂದಿದ್ದು ಅ ಪ್ರತ್ಯಯ ಆ ಉಪಸರ್ಗ ಸೇರಿದಾಗ ಆ+ ಚರ್+ ಅ> ಆಚಾರ( ಧಾತುವಿನ ಹ್ರಸ್ವ ಸ್ವರ ದೀರ್ಘವಾಗುತ್ತದೆ) ಸದ್ವರ್ತನೆ ಎಂಬರ್ಥ ಪಡೆದುಕೊಳ್ಳುತ್ತದೆ. ಮತ್ತೆ ಸದ್ ಎಂಬ ಉಪಸರ್ಗ ಸೇರಿ ಸದಾಚಾರ ಪದವಾದಾಗ ವಿಶೇಷಾರ್ಥ ಪಡೆಯುತ್ತದೆ. ಸದಾಚಾರ ಸತ್ಪುರುಷರ ಆಚಾರವಾಗಿದೆ. ಬ್ರಾಹ್ಮೀಮಹೂರ್ತದಲ್ಲಿ ಏಳುವುದು, ಪರಮಾತ್ಮನ ಧ್ಯಾನ, ಮಂಗಳಕರ ವಚನ ಇವುಗಳು ಸದಾಚಾರಿಗಳ ಸಾಂಪ್ರದಾಯಿಕ ಅನುಷ್ಠಾನಗಳಾಗಿವೆ. ಈ ಸದಾಚಾರಕ್ಕೆ ಧರ್ಮವು ಮೂಲವಾಗಿರುತ್ತದೆ. ಉತ್ತಮವಾದದ್ದನ್ನು ಧರಿಸಿ ಆಚರಣೆಗೆ ತರುವುದೇ ಧರ್ಮವಾಗಿದೆ. ಸದಾಚಾರ ಸಂಪನ್ನರು ಸಮಾಜದ ಉನ್ನತಿಗಾಗಿ ಶ್ರಮಿಸುತ್ತಾರೆ. ಓದಿದ್ದಕ್ಕಾಗಿ ಧನ್ಯವಾದಗಳು.🙏🙏🙏🙏🙏💐🌷🌸🌹🌻🌺 ***ಅ.ನಾ.****

www.esirikannada.com

***ಪಂಡಿತ/ ಪಾಮರ:-****

ವಿದ್ವಾಂಸ / ಅಜ್ಞ ಎಂಬ ಅರ್ಥಗಳು ಕ್ರಮವಾಗಿ ಪಂಡಿತ,ಪಾಮರ ಪದಗಳಿಗಿವೆ. ಪಂಡ ಧಾತು, ಜ್ಞಾನ ಎಂಬರ್ಥ ಹೊಂದಿದ್ದು, ಇತ ಪ್ರತ್ಯಯ ಸೇರಿ ಪಂಡಿತ ಪದದ ನಿಷ್ಪತ್ತಿಯಾಗಿದೆ. ಒಳ್ಳೆಯ ಜ್ಞಾನವನ್ನು ಹೊಂದಿದವನು, ಬುದ್ಧಿವಂತ ಎಂಬರ್ಥ ಪಂಡಿತ ಪದಕ್ಕಿದೆ. ಮೃ ಧಾತು ಪ್ರಾಣಬಿಡುವುದು ಎಂಬರ್ಥ ಹೊಂದಿದ್ದು ವಿಕರಣ ಪ್ರತ್ಯಯ ಅ ಸೇರಿ ಮರ ಎಂದಾಗುತ್ತದೆ. ಪಾ ಎಂಬ ಧಾತು ನಿರೀಕ್ಷಿಸು ಎಂಬರ್ಥ ಹೊಂದಿದ್ದು ಪಾ+ಮರ> ಪಾಮರ ಎಂದಾದಾಗ ಏನೂ ತಿಳಿಯದವನು, ಅಜ್ಞ ಎಂಬರ್ಥ ಸ್ಫುರಿಸುತ್ತದೆ. ಪಂಡಿತ ಪಾಮರ ಎರಡೂ, ವಿರುದ್ಧಾರ್ಥ ಪದಗಳಾಗಿದ್ದು ಜೋಡಿನುಡಿಗಳಾಗಿಯೂ ಬಳಕೆಯಲ್ಲಿದೆ. ಓದಿದ್ದಕ್ಕಾಗಿ ಧನ್ಯವಾದಗಳು.🙏🙏🙏🙏🙏🌹🌻🌺🌷🌸 ****ಅ.ನಾ.****

www.esirikannada.com

***ಕಲ್ಪನೆ/ ಪರಿಕಲ್ಪನೆ:-****

"ಕೃಪೂ" ಧಾತು ಸಾಮರ್ಥ್ಯ ಎಂಬರ್ಥ ಹೊಂದಿದ್ದು ವಿಕರಣ ಪ್ರತ್ಯಯ ಅ ಸೇರಿದಾಗ ಕೃಪ್+ ಅ> ಕರ್ಪ( ರಕಾರಕ್ಕೆ ಲ ಆದೇಶ) > ಕಲ್ಪ ಎಂದಾಗುತ್ತದೆ ಇದಕ್ಕೆ ನ+ ಆ ಪ್ರತ್ಯಯ ಸೇರಿ ಕಲ್ಪನಾ ಪದದ ನಿಷ್ಪತ್ತಿ. ನಿರ್ಮಾಣ,ಊಹೆ, ಶಂಕೆ ಎಂಬರ್ಥ ಸ್ಫುರಿಸುತ್ತದೆ. ಕನ್ನಡದಲ್ಲಿ ಕಲ್ಪನೆ ಎಂದಾಗಿದೆ. ಕಲ್ಪನಾ ಪದಕ್ಕೆ ಪರಿ ಎಂಬ ಉಪಸರ್ಗ ಸೇರಿ ಪರಿಕಲ್ಪನಾ ಎಂದಾದಾಗ ಸಜ್ಜುಗೊಳಿಸುವುದು, ನಿಶ್ಚಯಿಸುವುದು, ಸೃಷ್ಟಿಸುವುದು ಎಂಬರ್ಥಗಳು ಸ್ಫುರಿಸುತ್ತವೆ. ಕನ್ನಡದಲ್ಲಿ ಪರಿಕಲ್ಪನೆ ಎಂದಾಗಿದೆ. ಓದಿದ್ದಕ್ಕಾಗಿ ಧನ್ಯವಾದಗಳು.🙏🙏🙏🙏🙏🌺🌻🌹🌷🌸💐 ****ಅ.ನಾ.*****

www.esirikannada.com

***ಸುಪ್ರಭಾತ:-****

ಬೆಳಗಿನ ಜಾವದಲ್ಲಿ ಕೇಳುವ ಮಂಗಳಕರ ಶ್ಲೋಕ ಸುಪ್ರಭಾತ. ಭಾರತೀಯ ಸಂಸ್ಕೃತಿಯ ಒಂದು ಭಾಗವಿದು. ಹಗಲಿನ ಪ್ರಾರಂಭ ಕಾಲವನ್ನು ಸುಪ್ರಭಾತ ಎಂದು ಕರೆಯಲಾಗಿದೆ. "ಭಾ" ಧಾತು ದೀಪ್ತಿ, ಪ್ರಕಾಶಿಸುವುದು ಎಂಬರ್ಥವುಳ್ಳದ್ದು. ತ ಪ್ರತ್ಯಯ ಸೇರಿ ಭಾತ ಎಂದಾಗಿ ಪ್ರಾತಃಕಾಲ ಎಂಬರ್ಥ ಸ್ಫುರಿಸುತ್ತದೆ. ಸು ಮತ್ತು ಪ್ರ ಎಂಬ ಎರಡು ಉಪಸರ್ಗಗಳು ಸೇರಿ ಸುಪ್ರಭಾತ ಎಂದಾಗಿ ಒಳ್ಳೆಯ ಸಮಯವನ್ನು ಸೂಚಿಸುವ, ಶುಭಸೂಚಕವಾದ ಬೆಳಗಿನ ವೇಳೆ ಎಂಬರ್ಥ ಸ್ಫುರಿಸುತ್ತದೆ. ಇದರ ಮುಂದುವರಿದ ಅರ್ಥವೇ ಮಂಗಳಕರ ಪ್ರಾರ್ಥನೆ. ಪ್ರಭಾತಫೇರಿಯನ್ನು ನಡೆಸುವುದೂ ಪ್ರಭಾತ ಸಮಯದಲ್ಲಿ. ಸರ್ವರಿಗೂ ಸುಪ್ರಭಾತ ಮಂಗಳ ತರಲಿ. ಓದಿದ್ದಕ್ಕಾಗಿ ಧನ್ಯವಾದಗಳು.🙏🙏🙏🙏🌸🌷💐🌹🌻 ***ಅ.ನಾ.****

www.esirikannada.com

***ಮಂಗಲಾರತಿ/ ಮಂಗಳಾರತಿ****

ದೇವರ ಪೂಜೆಯಲ್ಲಿ ಕರ್ಪೂರ ತುಪ್ಪದ ಬತ್ತಿ ಹಚ್ಚಿ ಆರತಿ ಮಾಡುವುದಕ್ಕೆ ಈ ಪದ ಉಪಯೋಗಿಸುತ್ತೇವೆ. ಇದನ್ನು ಅರಿಸಮಾಸ ಎಂದು ಗುರುತಿಸಲಾಗಿದೆ. ಆರಾತ್ರಿಕ ಎಂಬ ಸಂಸ್ಕೃತ ಪದದಿಂದ ಆರತಿ ಪದವು ತದ್ಭವವಾಗಿ ಬಂದಿದೆ. ಸಂಸ್ಕೃತದ ಅರ್ಥ ಕರ್ಪೂರವನ್ನು ತಟ್ಟೆಯಲ್ಲಿಟ್ಟು ಮಾಡುವ ನೀರಾಜನ. ಕನ್ನಡದ ತದ್ಭವ ಆರತಿಗೂ ಇದೇ ಅರ್ಥ. ಮಂಗಳಾರತಿ ಪದ ಸಂಸ್ಕೃತ ಕನ್ನಡ ಸೇರಿರುವುದರಿಂದ ಅರಿ ಸಮಾಸ. ಆದರೆ ಸಂಸ್ಕೃತದಲ್ಲೂ ಆರತಿ ಎಂಬ ಪದವೊಂದಿದೆ. ನಿವೃತ್ತಿ, ವಿಶ್ರಾಂತಿ ಎಂಬರ್ಥಗಳು ಇವೆ. ಸಂಸ್ಕೃತದ ಮಂಗಲ+ ಆರತಿ> ಮಂಗಲಾರತಿ ಪದವು ಶುಭದ ವಿಶ್ರಾಂತಿ/ ಶುಭದ ನಿವೃತ್ತಿ ಎಂಬರ್ಥಗಳನ್ನು ಸ್ಫುರಿಸುತ್ತದೆ. ಈಗ ಕನ್ನಡದ ಮಂಗಳಾರತಿ ಸಂಸ್ಕೃತದ ಮಂಗಲಾರತಿ ಎರಡು ಬೇರೆ ಬೇರೆ ಅರ್ಥವುಳ್ಳ ಪದಗಳು ಇವೆ ಎಂದ ಹಾಗಾಯ್ತು. ಆದರೆ ಸಂಸ್ಕೃತದ ಮಂಗಲಾರತಿ ಕನ್ನಡದಲ್ಲಿ ಬಳಕೆಯಿಲ್ಲ. ಒಂದು ಸಂಸ್ಕೃತ ಒಂದು ಕನ್ನಡ( ತದ್ಭವ) ಪದಗಳು ಸೇರಿರುವ ಮಂಗಳಾರತಿ ಬಳಕೆಯಲ್ಲಿದ್ದು ನಮಗೆ ಚಿರಪರಿಚಿತವಾದದ್ದಾಗಿದೆ. ಮಂಗಳಾರತಿ ಪದದ ನಿಷ್ಪತ್ತಿ ಬಗ್ಗೆ ನಮಗೆ ತಿಳಿದಿರಲೆಂದು ಈ ಚಿಂತನ. ಓದಿದದ್ದಕ್ಕಾಗಿ ಧನ್ಯವಾದಗಳು.🙏🙏🙏🙏🙏🌷🌺🌹💐🌸🌻 ****ಅ.ನಾ.*****

www.esirikannada.com

***ಪುತ್ತ್ರ / ಪುತ್ತ್ರೀ****

ಪುತ್ತ್ರ / ಪುತ್ತ್ರೀ ಪುತ್ರ ಪುತ್ರಿ ಮಗ ಮಗಳು ಎಂಬರ್ಥದ ಪದಗಳು ನಮಗೆ ಚಿರಪರಿಚಿತ. ಪುತ್ರ ಪುತ್ರಿಯರು ಇಲ್ಲದ ಮನೆ ನರಕ ಸದೃಶ ಎಂಬ ಮಾತು ಚಾಲ್ತಿಯಲ್ಲಿದೆ. ಮನೆ ಸ್ವರ್ಗವಾಗುವುದು ಮಕ್ಕಳಿಂದ. ಎಲ್ಲ ತಂದೆತಾಯಿಯರೂ ಮಕ್ಕಳಿಗಾಗಿ ಹಂಬಲಿಸುವುದು ಪ್ರಕೃತಿ ನಿಯಮ. ಪುತ್ ಎನ್ನುವುದು ಒಂದು ನರಕ. ಆ ನರಕದಿಂದ ತಂದೆತಾಯಿಯರನ್ನು ರಕ್ಷಿಸುವುದು ಮಕ್ಕಳು. ಪುತ್ = ನರಕ; ತ್ರ= ರಕ್ಷಿಸು ನರಕದಿಂದ ರಕ್ಷಿಸುವುದರಿಂದ ಮಗನಿಗೆ ಪುತ್+ ತ್ರ> ಪುತ್ತ್ರ ಎಂದು ಕರೆಯಲಾಗಿದೆ. ಸ್ತ್ರೀಲಿಂಗದಲ್ಲಿ "ಈ" ಪ್ರತ್ಯಯ ಸೇರಿ ಪುತ್ತ್ರ+ ಈ> ಪುತ್ತ್ರೀ ಎಂದಾಗಿದೆ. ತಂದೆ ತಾಯಿಯರನ್ನು ಪುತ್ ನರಕದಿಂದ ರಕ್ಷಿಸುವವರೇ ಪುತ್ತ್ರ/ಪುತ್ತ್ರೀ. ಕನ್ನಡದಲ್ಲಿ ಪುತ್ರ/ ಪುತ್ರಿ ಎಂದಾಗಿದೆ. ಮೂಲಾರ್ಥವನ್ನು ತಿಳಿಸುವ ಉದ್ದೇಶ ಈ ಚಿಂತನ. ಓದಿದ್ದಕ್ಕಾಗಿ ಧನ್ಯವಾದಗಳು.🙏🙏🙏🙏🙏🌷🌸🌺💐🌹 ****ಅ.ನಾ.*****

www.esirikannada.com

***ಉದ್ಯಾನ/ ಪ್ರಯಾಣ****

ಉದ್ಯಾನ ಪದವು ಕೈತೋಟ,ಕ್ರೀಡಾವನ ಅರ್ಥವನ್ನು ಪಡೆದಿದೆ. ಪ್ರಯಾಣ ಪದವು ಹೊರಡುವುದು,ಯಾತ್ರೆ ಮುಂತಾದ ಅರ್ಥಗಳನ್ನು ಪಡೆದಿದೆ. ಎರಡೂ ಪದಗಳು ವಿಭಿನ್ನಾರ್ಥಗಳನ್ನು ಪಡೆದಿದ್ದರೂ ಎರಡೂ ಪದಗಳ ಮೂಲಧಾತು ಒಂದೇ ಆಗಿದೆ. "ಯಾ" ಎಂಬ ಧಾತು ಒಯ್ಯುವುದು, ಸಾಗಿಸುವುದು ಎಂಬರ್ಥವನ್ನು ಹೊಂದಿದ್ದು ನ ಪ್ರತ್ಯಯ ಸೇರಿ ಯಾನ ಎಂದಾದಾಗ ವಾಹನ, ಸಂಚಾರ ಎಂಬರ್ಥಗಳು ಸ್ಫುರಿಸುತ್ತದೆ. ಯಾನ ಪದಕ್ಕೆ ಉದ್ ಉಪಸರ್ಗ ಸೇರಿ ಉದ್ಯಾನ ಪದ ಸಿದ್ಧಿಸಿ ಕೈತೋಟದ ಅರ್ಥ ಸ್ಫುರಿಸುತ್ತದೆ. "ಯಾನ" ಪದಕ್ಕೆ ಪ್ರ ಉಪಸರ್ಗ ಸೇರಿ "ಪ್ರಯಾನ" ಎಂದಾಗಿ, ಪದದೊಳಗೆ ರೇಫೆ ಇರುವಕಾರಣ ನಕಾರಕ್ಕೆ ಣಕಾರಾದೇಶವಾಗಿ ಪ್ರಯಾಣ ಎಂದಾಗಿ ಹೊರಡುವುದು ಎಂಬರ್ಥ ಸ್ಫುರಿಸುತ್ತದೆ. ಒಂದೇ ಧಾತುವಿಗೆ ವಿವಿಧ ಉಪಸರ್ಗ/ ಪ್ರತ್ಯಯಗಳು ಸೇರಿದಾಗ ವಿವಿಧಾರ್ಥಗಳು ಸ್ಫುರಿಸುವುದು ಸಂಸ್ಕೃತ ಭಾಷೆಯ ಲಕ್ಷಣವಾಗಿದೆ. ಓದಿದ್ದಕ್ಕಾಗಿ ಧನ್ಯವಾದಗಳು.🙏🙏🙏🙏🙏🌻🌹🌷💐🌺🌸 ***ಅ.ನಾ.****

www.esirikannada.com

***ಉಪಹಾರ/ ಉಪಾಹಾರ****

ಉಪಹಾರ/ ಉಪಾಹಾರ ಈ ಎರಡೂ ಪದಗಳ ಅರ್ಥ ಬೇರೆಬೇರೆಯೇ ಇದೆ. ಕೆಲವುಕಡೆ ಉಪಾಹಾರ ಮಂದಿರಕ್ಕೆ ಉಪಹಾರಮಂದಿರ ಎಂದು ಬರೆದಿರುವುದನ್ನು ಕಾಣುತ್ತೇವೆ. ಹೃ ಧಾತು ಒಯ್ಯು,ಸಾಗಿಸು, ಸ್ವೀಕಾರ,ಕದಿಯುವುದು ಎಂಬ ನಾನಾರ್ಥ ಹೊಂದಿದೆ. ಇದಕ್ಕೆ ಪ್ರತ್ಯಯ ಅ ಸೇರಿ ಹೃ+ ಅ> ಹಾರ ಎಂದಾಗಿ ಉಪಸರ್ಗ "ಉಪ" ಸೇರಿ ಉಪಹಾರ ಪದವಾದಾಗ, ದೇವತೆಗಳ ನೈವೇದ್ಯ, ಪೂಜೆ, ಸಮೀಪದಲ್ಲಿರುವ ಹಾರ ಎಂಬರ್ಥಗಳು ಸ್ಫುರಿಸುತ್ತವೆ. ಹಾರ ಪದಕ್ಕೆ ಆ ಉಪಸರ್ಗ ಸೇರಿ ಆಹಾರ ಆದಾಗ ಭೋಜನ,ಊಟ ಎಂಬರ್ಥ ಸ್ಫುರಿಸುತ್ತದೆ. ಆಹಾರ ಪದಕ್ಕೆ "ಉಪ" ಉಪಸರ್ಗ ಸೇರಿ ಉಪ+ ಆಹಾರ> ಉಪಾಹಾರ ಎಂದಾದಾಗ ಲಘು ಆಹಾರ, ತಿಂಡಿ, ಹಣ್ಣು ಮುಂತಾದ ಆಹಾರಗಳು ಎಂದರ್ಥ ಸ್ಫುರಿಸುತ್ತದೆ. ಊಟದಮನೆಗೆ ಉಪಹಾರಮಂದಿರ ಎಂಬ ಪದ ಉಪಯೋಗಿಸುವುದು ಸರಿಯಲ್ಲ ಅಲ್ಲವೇ? ಓದಿದ್ದಕ್ಕಾಗಿ ಧನ್ಯವಾದಗಳು.🙏🙏🙏🙏🙏💐🌹🌺🌷🌸🌻 ****ಅ.ನಾ.*****

www.esirikannada.com

***ಪದ ಚಿಂತನ****

ಚಾಮುಂಡೇಶ್ವರೀ: ಮೈಸೂರು ನಗರದ ಅಧಿದೇವತೆ. ವಿಶ್ವವಿಖ್ಯಾತ ದಸರಾ ಹಬ್ಬ ನಡೆಯುವುದು ಚಾಮುಂಡೇಶ್ವರಿ ತಾಯಿಯ ಹೆಸರಿನಲ್ಲಿ. ಚಡಿ ಧಾತು ಕೋಪವುಳ್ಳ ಅರ್ಥವಿದ್ದು ಪ್ರತ್ಯಯ ಸೇರಿ ಚಂಡ ಆಗುತ್ತದೆ. ಮುಡಿ ಧಾತು, ಕತ್ತರಿಸಿದ ಎಂಬ ಅರ್ಥವಿದ್ದು, ಪ್ರತ್ಯಯ ಸೇರಿ ಮುಂಡ ಎಂದಾಗಿದೆ. ಚಂಡ ಮುಂಡ ಎಂಬ ಇಬ್ಬರು ರಾಕ್ಷಸರನ್ನು ಈಶ್ವರೀ( ದುರ್ಗೆ) ಸಂಹರಿಸಿ,ಚಂಡಮುಂಡರನ್ನು ಕೈಯಲ್ಲಿ ಹಿಡಿದಿದ್ದಾಳೆ. ಚಂಡ+ ಮುಂಡ> ಚಾಮುಂಡ+ ಆ> ಚಾಮುಂಡಾ ಆಗಿದ್ದಾಳೆ. ಈಶ್ವರೀ ಸೇರಿ ಚಾಮುಂಡೇಶ್ವರೀ. ಸಪ್ತಮಾತೃಕೆಗಳಲ್ಲಿ ಚಾಮುಂಡೇಶ್ವರಿ ಒಬ್ಬಳು. ಚಾಮುಂಡೇಶ್ವರೀ ಎಲ್ಲರನ್ನೂ ಕಾಪಾಡಲಿ. ಓದಿದ್ದಕ್ಕಾಗಿ ಧನ್ಯವಾದಗಳು.🙏🙏🙏🙏🙏🙏🌸🌷🌺💐🌹 ****ಅ.ನಾ.*****

www.esirikannada.com

***ಪದ ಚಿಂತನ****

ರೋದನ/ರೋಧನ ಈ ಎರಡೂ ಪದಗಳು ಬೇರೆ ಬೇರೆ ಅರ್ಥವುಳ್ಳ ಪದಗಳಾಗಿವೆ. ಅಳುವುದು ಮತ್ತು ಅಡ್ಡಿಪಡಿಸುವುದು ಎಂಬ ಅರ್ಥಗಳು ಕ್ರಮವಾಗಿ ಈ ಪದಗಳಿಗಿದೆ. ಇದನ್ನು ಅದಲು ಬದಲು ಮಾಡಿ ಅನೇಕರು ಬರೆಯುತ್ತಾರೆ. ಆಗ ವಾಕ್ಯದ ಅರ್ಥಕ್ಕೆ ಭಂಗ ಬರುತ್ತದೆ. "ಆಕೆ ಆಪ್ತರನ್ನು ಕಳೆದುಕೊಂಡು ದುಃಖದಿಂದ ರೋಧಿಸಿದಳು" ಎಂದು ವಾಕ್ಯ ಬರೆದರೆ ದುಃಖದಿಂದ ಅಡ್ಡಿಪಡಿಸಿದಳು ಎಂದಾಗುತ್ತದೆ. ಇದು ಅರ್ಥಕ್ಕೆ ಭಂಗ. ಅಲ್ಲಿ ರೋದಿಸಿದಳು ಕ್ರಿಯಾಪದ ಬರಬೇಕು. ರುದ್ ಧಾತು ಕಣ್ಣೀರು ಸುರಿಸು ಎಂಬ ಅರ್ಥ ಹೊಂದಿದ್ದು, ಪ್ರತ್ಯಯ ಸೇರಿ ರೋದನ ಎಂದಾದಾಗ ಅಳುವುದು ಎಂಬರ್ಥ ಸ್ಫುರಿಸುತ್ತದೆ. ರುಧ್ ಧಾತು ಅಡ್ಡಿ, ತಡೆ ಎಂಬರ್ಥ ಹೊಂದಿದ್ದು , ಪ್ರತ್ಯಯ ಸೇರಿ ರೋಧನ ಎಂದಾದಾಗ ಅಡ್ಡಿಪಡಿಸು, ತಡೆದು ನಿಲ್ಲಿಸು ಎಂಬರ್ಥಗಳು ಸ್ಫುರಿಸುತ್ತದೆ. ರೋದನ/ ರೋಧನ ಅದಲು ಬದಲಾದರೆ ಅರ್ಥಭಂಗ ಆಗುತ್ತದೆ. ಈ ಪದಗಳನ್ನು ಸೂಕ್ತ ಅರ್ಥದಲ್ಲಿ ಬಳಸುವ ಆಲೋಚನೆ, ನಮಗೆ ಇರಬೇಕಾದದ್ದು ಅಪೇಕ್ಷಣೀಯ. ಓದಿದ್ದಕ್ಕಾಗಿ ಧನ್ಯವಾದಗಳು.🙏🙏🙏🙏🙏🙏🌹💐🌸🌷🌻🌺 ****ಅ.ನಾ.****

30/07/2020

www.esirikannada.com

***ಪದ ಚಿಂತನ****

ತತ್ತ್ವ|ಸತ್ತ್ವ ತತ್ತ್ವ ಎಂದರೆ ವಸ್ತುವಿನ ಸ್ವಭಾವ, ಅನುಗತ ಅರ್ಥ, ಪರಬ್ರಹ್ಮ, ಪರಮಾತ್ಮ ಎಂಬರ್ಥಗಳಿವೆ. ತತ್ ಪದಕ್ಕೆ ಅದು, ವಿಷಯ ಎಂಬರ್ಥಗಳಿವೆ. ತ್ವ ಸೇರಿದಾಗ ತತ್ತ್ವ ಎಂಬ ಪದ ಸಿದ್ಧಿಸುತ್ತದೆ. ಅದು ನೀನು ಎಂದು ಪರಮಾತ್ಮನಿಗೆ ಹೇಳುವಮಾತು.ತತ್ತ್ವದಲ್ಲಿ ಪಾರಮಾರ್ಥಿಕ ಚಿಂತನೆ ಇರುತ್ತದೆ. ಈ ಪದವನ್ನು ತತ್ವ ಎಂದೇ ಬರೆಯುತ್ತಾರೆ. ತ ಒಂದು ಅಕ್ಷರದ ಜೊತೆಗೆ ಏಕಾಕ್ಷರ ಧಾತು. ಅಮೃತ, ಕಳ್ಳ, ಕೋಪ ಮುಂತಾದ ಅನೇಕ ಅರ್ಥಗಳಿವೆ. ತತ್ವ ಎಂದು ಬರೆದರೆ ಅಪೇಕ್ಷಿತ ತತ್ತ್ವ ಪದದ ಅರ್ಥ ಸ್ಫುರಿಸುವುದಿಲ್ಲ. ತತ್ವ ಎಂಬ ಪದ ಬಳಕೆಯಲ್ಲೇ ಇಲ್ಲ. ತತ್ತ್ವ ಎಂಬುದು ಸರಿ ರೂಪ. ಇದನ್ನೇ ತತ್ತ್ವಪದ, ತತ್ತ್ವಜ್ಞಾನಿ ಎಂದು ಹೇಳಲು ಉಪಯೋಗಿಸುತ್ತೇವೆ. ಸತ್ತ್ವ ಎಂಬ ಪದಕ್ಕೆ ದ್ರವ್ಯ, ವಸ್ತು, ಬಲ, ಜೀವ, ಶಕ್ತಿ, ಚಿತ್ತ ಮುಂತಾದ ಅರ್ಥಗಳಿವೆ. ಸತ್ ಪದಕ್ಕೆ ಒಳ್ಳೆಯ, ಶ್ರೇಷ್ಠ, ಈಗಿನ, ಸತ್ಯ ಮುಂತಾದ ಅರ್ಥಗಳಿವೆ. ಇದಕ್ಕೆ ತ್ವ ಸೇರಿ ಸತ್ತ್ವ ಎಂದು ಪದ ಉಂಟಾಗುತ್ತದೆ. ಈ ಪದವನ್ನು ಸತ್ವ ಎಂದು ಬರೆಯಲಾಗುತ್ತಿದೆ. ಸ ಅಕ್ಷರಕ್ಕೆ ವಿಷ್ಣು, ಪಕ್ಷಿ, ವಾಯು, ಜೊತೆ ಮುಂತಾದ ಅನೇಕ ಅರ್ಥಗಳಿದ್ದು ಸತ್ವ ಎನ್ನುವ ಪದ ನಾವು ಅಪೇಕ್ಷಿಸುವ ಅರ್ಥವಿರುವ( ಮೇಲೆ ತಿಳಿಸಿದ ಸತ್ತ್ವದ ಅರ್ಥ) ಪದ ಆಗಿಲ್ಲ. ಸತ್ತ್ವ ಎಂಬುದೇ ಸರಿ ರೂಪ. ಹಾಗಾಗಿ ತತ್ವ ಸತ್ವ ಎಂಬ ಸರಿಯಲ್ಲದ ರೂಪವನ್ನು ತತ್ತ್ವ ಸತ್ತ್ವ ಎಂದು ಬಳಸಲು ಅಡ್ಡಿ ಇಲ್ಲ ಅಲ್ಲವೇ? ಓದಿದ್ದಕ್ಕಾಗಿ ಧನ್ಯವಾದಗಳು.🙏🙏🙏🙏🙏🌹🌻🌺🌷🌸💐 ****ಅ.ನಾ****

1 thought on “ಪದ ಚಿಂತನ

Leave a Reply

Your email address will not be published. Required fields are marked *