ಕಾಲ ಕಾಲನು ಬಂಧಿ

ಜಾಣಮೂರ್ಖ

ಕಾಲಕಾಲನು ಬಂಧಿ

ಮಿಥ್ಯದೊಳಗಿಷ್ಟು ಮೇಣ್
ಸತ್ಯದನ್ವೇಷಣೆಯೊ
ಳಿಷ್ಟಿಷ್ಟು ಆಯು ತಾ
ನಳಿಯುತಿಹುದಯ್ಯೊ
ಕಾಲ ಕಳೆಯಲುಬೇಡ
ಕಾಲ ಕಾಯ್ವನೆ ಹೇಳು
ಕಾಲಕಾಲನು ಬಂಧಿ
ಜಾಣಮೂರ್ಖ //

ನಮ್ಮ ಆಯಸ್ಸನ್ನು ಮಿಥ್ಯದೊಳಗಿದ್ದು ಇಷ್ಟು , ಅಂತೆಯೇ ಸತ್ಯದ ಬಗ್ಗೆ ಚಿಂತಿಸುತ್ತಾ ಅದನ್ನು ಹುಡುಕುವುದರೊಳಗೆ ಒಂದಿಷ್ಟು , ಹೀಗೆ ಇಷ್ಟಿಷ್ಟೇ ಕಳೆಯುತ್ತಿದ್ದೇವೆ. ಆದರೆ ಕಾಲವನ್ನು ವ್ಯರ್ಥವಾಗಿ ಕಳೆಯದೇ ಅರ್ಥಪೂರ್ಣವಾಗಿ ಕಳೆಯಬೇಕು. ಜಗತ್ತಿಗೆ ನಾವು ಮಾದರಿಯಾಗಿರಬೇಕು. ಏಕೆಂದರೆ ಕಾಲನು ಯಾರಿಗೂ , ಯಾವುದಕ್ಕೂ ಕಾಯುವುದಿಲ್ಲ. ಆ ಕ್ಷಣ ಬಂತೆಂದರೆ ಮುಗಿಯಿತು. ಎಲ್ಲ ಬಂಧಗಳನ್ನೂ ಕಳಚಿ ಕಾಲನಿಗೆ ಬಂಧಿಗಳಾಗಿ ಸಾಗುತ್ತೇವೆ. ಅಷ್ಟೇ ಏಕೆ ಕಾಲಕಾಲನೂ (ಯಮನಿಗೇ ಯಮನಾದ ಶಿವ) ಸಹ ವಿಧಿಯನ್ನು ಮೀರಲಾರ ಅಲ್ಲವೇ ? ತಾನೇ ಕರ್ತನಾದರೂ ಅದಕ್ಕೆ ಅವನೇ ಬದ್ಧನೂ , ಬಂಧಿಯೂ ಆಗಿದ್ದಾನೆ ಎಂದಮೇಲೆ ಇನ್ನು ಸಾಮಾನ್ಯರಾದ ನಮ್ಮಗಳ ಪಾಡೇನು ! ಆ ಶಿವನೇ ಒಪ್ಪುವಂತೆ ಬದುಕ ಬೇಕು ನಾವು. ಅಂತಿರಬೇಕು ನಮ್ಮ ಬದುಕು. ಅಲ್ಲವೇ ಗೆಳೆಯರೇ !?
✍️ಮುರಳೀಧರ ಹೆಚ್.ಆರ್.

Leave a Reply

Your email address will not be published. Required fields are marked *